ಶಕುಂತಲಾ
	ವಿಶ್ವಾಮಿತ್ರನಿಂದ ಮೇನಕೆ ಎಂಬ ಅಪ್ಸರೆಯಲ್ಲಿ ಜನಿಸಿದವಳು. ಬ್ರಾಹ್ಮಣತನವನ್ನು ಸಂಪಾದಿಸುವ ಸಲುವಾಗಿ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರನನ್ನು ಭಂಗಪಡಿಸಲು ಇಂದ್ರನಿಂದ ನಿಯೋಜಿತ ಳಾದ ಮೇನಕೆ, ಆತನಿಂದ ಹೆಣ್ಣು ಮಗು ಒಂದನ್ನು ಪಡೆಯುತ್ತಾಳೆ. ತಾನು ಬಂದ ಉದ್ದೇಶ ನೆರವೇರಿದ ಬಳಿಕ ಮೇನಕೆ, ಆ ಮಗುವನ್ನು ಅಲ್ಲಿಯೇ ಬಿಟ್ಟು ದೇವಲೋಕಕ್ಕೆ ಹೊರಟುಹೋಗುತ್ತಾಳೆ. ವಿಶ್ವಾಮಿತ್ರನೂ ತನ್ನ ಅವಿವೇಕಕ್ಕೆ ನಾಚಿ, ಆ ಮಗುವನ್ನು ಅಲ್ಲಿಯೇ ಬಿಟ್ಟು ಮತ್ತೆ ತಪಸ್ಸಿಗೆ ತೊಡಗುತ್ತಾನೆ. ಆಗ ಆ ಮಗುವನ್ನು ಶಕುಂತಗಳು(ಹಕ್ಕಿ) ಪೋಷಿಸತೊಡಗಿದವು. ಈ ಕಾರಣದಿಂದಲೇ ಶಕುಂತಲೆ ಎಂದು ಹೆಸರಾದುದು. ಅನಂತರ ಈಕೆ ಕಣ್ವ ಋಷಿಯ ಆಶ್ರಮದಲ್ಲಿ ಬೆಳೆದಳು. ಒಮ್ಮೆ ಬೇಟೆಗಾಗಿ ಬಂದ ದುಷ್ಯಂತ ಮಹಾರಾಜ ಕಣ್ವರು ಇಲ್ಲದ ವೇಳೆಯಲ್ಲಿ ಆಶ್ರಮದ ಆತಿಥ್ಯ ಪಡೆದು ಶಕುಂತಲೆಯನ್ನು ಮೋಹಿಸಿ ಗಾಂಧರ್ವ ವಿಧಿಯಂತೆ ವಿವಾಹವಾಗುತ್ತಾನೆ. ಕೆಲ ದಿನ ಕಳೆದ ಮೇಲೆ ಊರಿಗೆ ಹೊರಟ ಮಹಾರಾಜ, ಶಕುಂತಲೆಯನ್ನು ತರುವಾಯ ಕರೆಸಿಕೊಳ್ಳುವುದಾಗಿ ವಾಗ್ದಾನ ನೀಡಿ, ತನ್ನ ನೆನಪಿಗಾಗಿ ಒಂದು ಉಂಗುರ ನೀಡಿ ಹೋಗುತ್ತಾನೆ. ಶಕುಂತಲೆ ವಿರಹವೇದನೆಯಲ್ಲಿ ಇದ್ದಾಗ ಆಶ್ರಮಕ್ಕೆ ಆಗಮಿಸಿದ ದೂರ್ವಾಸಮುನಿಯು ಆಶ್ರಮದ ನಿಯಮದಂತೆ ತನ್ನನ್ನು ಸತ್ಕರಿಸಲಿಲ್ಲ ಎಂಬ ಏಕೈಕ ಕಾರಣದಿಂದ ನೀನು ಯೋಚಿಸುತ್ತಿ ರುವವ ನಿನ್ನನ್ನು ಮರೆಯಲಿ ಎಂದು ಶಾಪ ನೀಡಿದ. ದುಷ್ಯಂತನನ್ನು ನೆನೆದು ಬಾಹ್ಯ ಪ್ರಪಂಚವನ್ನೇ ಮರೆತಿದ್ದ ಶಕುಂತಲೆಗೆ ಇದು ಯಾವುದೂ ತಿಳಿಯದೆ ಇದ್ದಾಗ, ಆಕೆಯ ಪರವಾಗಿ ಸಖಿಯರು ದೂರ್ವಾಸರನ್ನು ಬಹಳವಾಗಿ ಕೇಳಿಕೊಂಡಾಗ, ಯಾವುದಾದರೂ ಗುರುತು ಕಂಡಾಗ ಆತನಿಗೆ ಮತ್ತೆ ನೆನಪು ಬಂದು ಒಳಿತಾಗುತ್ತದೆ ಎಂದು ಶಾಪ ವಿಮೋಚ ನೆಯ ದಾರಿ ತಿಳಿಸಿ ಹೋದರು. ಶಕುಂತಲೆ ಗರ್ಭವತಿಯಾಗುತ್ತಾಳೆ. ಕಣ್ವರು ಆಶ್ರಮಕ್ಕೆ ಹಿಂತಿರುಗಿದ ಮೇಲೆ, ಎಲ್ಲ ವಿಚಾರ ತಿಳಿದು ಶಕುಂತಲೆಯನ್ನು ದುಷ್ಯಂತನ ಅರಮನೆಗೆ ಕಳುಹಿಸುವ ಏರ್ಪಾಡು ಮಾಡುತ್ತಾರೆ. ಆದರೆ ಮಾರ್ಗಮಧ್ಯ, ದುಷ್ಯಂತ ನೀಡಿದ ಉಂಗುರವನ್ನು ಶಕುಂತಲೆ ಕಳೆದುಕೊಳ್ಳುತ್ತಾಳೆ. ದುಷ್ಯಂತ ಶಕುಂತಲೆಯನ್ನು ಕಂಡು, ಮರೆವಿನಿಂದ ಆಕೆಯನ್ನು ತಿರಸ್ಕರಿಸುತ್ತಾನೆ. ದುಷ್ಯಂತನಿಗೆ ಬೇಡವಾದ ಶಕುಂತಲೆ ಮತ್ತೆ ಕಣ್ವರ ಆಶ್ರಮಕ್ಕೆ ಹಿಂದಿರುಗದೆ ಮಾರೀಚರ ಆಶ್ರಮದಲ್ಲಿದ್ದು ಗಂಡು ಮಗುವನ್ನು ಹಡೆಯುತ್ತಾಳೆ. ಆತನೇ ಭರತ. ಮುಂದೆ ದುಷ್ಯಂತನಿಗೆ ತಾನು ಶಕುಂತಲೆಗೆ ನೀಡಿದ್ದ ಉಂಗುರ ದೊರೆತು, ಎಲ್ಲವೂ ಜ್ಞಾಪಕಕ್ಕೆ ಬಂದು ಶಕುಂತಲೆಯನ್ನು ಅರಸಿ ಬರುತ್ತಾನೆ. ಎಲ್ಲವೂ ಸುಖಾಂತದಲ್ಲಿ ಕೊನೆಗೊಳ್ಳುತ್ತದೆ.

ಭಾರತದ ಆದಿಪರ್ವದಲ್ಲಿ ಉಲ್ಲೇಖಗೊಂಡಿರುವ ಈ ಕಥಾವಸ್ತು ವನ್ನು ಆಧರಿಸಿ ಕಾಳಿದಾಸ ಸಂಸ್ಕøತದಲ್ಲಿ ಅಭಿಜ್ಞಾನ ಶಾಕುಂತಲಾ ಎಂಬ ನಾಟಕವನ್ನು ರಚಿಸಿ ಖ್ಯಾತನಾಗಿದ್ದಾನೆ. ಆ ನಾಟಕವನ್ನು ಬಸವಪ್ಪ ಶಾಸ್ತ್ರಿಗಳು ಕನ್ನಡಕ್ಕೆ ಅಮೋಘವಾಗಿ ಅನುವಾದಿಸಿ ಕೊಟ್ಟಿದ್ದಾರೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						
			(ಎ.ವಿ.ಕೆ.)